ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ

ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ

(~ ಮಾತಾಜಿ)


          ವಿಶ್ವಗುರು ಬಸವಣ್ಣನವರ 800ನೆಯ ಬಸವ ಲಿಂಗೈಕ್ಯ ಸಂಸ್ಮರಣೆಯ ನಿಮಿತ್ತ ಶುದ್ಧೀಕರಿಸಿದ ಗುರು ಬಸವಣ್ಣನವರ ವಚನಗಳ ಕೃತಿ 'ಬಸವ ವಚನ ದೀಪ್ತಿ'ಯನ್ನು 1996 ರಲ್ಲಿ ಪ್ರಕಟಿಸಿದೆ. ಗುರು ಬಸವಣ್ಣನವರ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ 3 ಹಂತಗಳನ್ನು ಗುರುತಿಸಿದೆ.

1.  ಮನೆಯ ಸಂಪ್ರದಾಯದಂತೆ ಬಹುದೇವತೋಪಾಸನೆ. 2. ಬಾಲ್ಯದಿಂದ ತಾರುಣ್ಯದವರಿಗೆ ಏಕ ದೇವೋತುಪಾಸನೆ ಏಕದೇವತೋಪಾಸನೆ 3. ಸಾಕ್ಷಾತ್ಕಾರದ ನಂತರ ಏಕದೇವೋಪಾಸನೆ.

 ಏಕದೇವತೆ - ಶಿವ ಉಪಾಸಕರಾಗಿದ್ದಾಗ ಬರೆದ ವಚನಗಳಲ್ಲಿ ಕೂಡಲಸಂಗಮದೇವ ಎಂಬ ವಚನಾಂಕಿತ ಹಾಗೆ ಇಟ್ಟು, ಸಾಕ್ಷಾತ್ಕಾರದ ನಂತರ ಏಕದೇವೋಪಾಸಕರಾದಾಗ ಬರೆದ ವಚನಗಳಲ್ಲಿ 'ಶಿವ' ಸೂಚಕವಾದ ಕೂಡಲಸಂಗಮದೇವದ ಬದಲಿಗೆ ಪರಮಾತ್ಮ ಸೂಚಕವಾದ 'ಲಿಂಗದೇವ' ಎಂಬ ವಚನಾಂಕಿತ ಇಟ್ಟು ಪುಸ್ತಕವನ್ನು ಹೊರ ತಂದೆ. 

ಪರಮಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದ ಅಪ್ಪಾಜಿ ಇರುವಾಗಲೇ ನಾನು ಈ ವಿಷಯ ಪ್ರಸ್ತಾಪಿಸಿದೆ. 'ಬಸವ ಧರ್ಮದ ಸಂಸ್ಕಾರಗಳು' ಎಂಬ ಪುಸ್ತಕವನ್ನು 1995ರ ಜನವರಿಯಲ್ಲಿ ಶರಣ ಮೇಳದಲ್ಲಿ ಬಿಡುಗಡೆ ಮಾಡಿದೆವು. ಆ ಪುಸ್ತಕದಲ್ಲಿ ಒಂದು ವಚನ ಹೀಗೆ ಮುದ್ರಿಸಿದ್ದೆ.

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು 

ಆದಿ ಮಧ್ಯ ಅವಸಾನಗಳಿಲ್ಲದ ಸ್ವತಂತ್ರ ಲಿಂಗವು 

ನಿತ್ಯ ನಿರ್ಮಲ ಲಿಂಗವು

ಅಯೋನಿ ಸಂಭವನಯ್ಯ ನಮ್ಮ ಲಿಂಗದೇವ

ಪೂಜ್ಯ ಗುರುಗಳಿಗೂ ಈ ನನ್ನ ಸಂಶೋಧನೆ ಬಹಳ ಮೆಚ್ಚುಗೆ ಆಯಿತು. ಪೂಜ್ಯರು 1995ರ ಜೂನ್ 30ರಂದು ಲಿಂಗೈಕರಾದರು. ಬಸವ ವಚನ ದೀಪ್ತಿಯನ್ನು 1996ರಲ್ಲಿ ಪ್ರಕಟಿಸಿದೆ.

 ತಾತ್ವಿಕ ವಿಷಯದ ಚಿಂತನೆ ಇಲ್ಲದ ಗುರು ಬಸವಣ್ಣನವರ ಜೀವನದ ವಿವಿಧ ಹಂತಗಳ ಅರಿವಿಲ್ಲದ ಅನೇಕರು ಲೌಕಿಕ ನಿಯಮ "ಒಬ್ಬರ ವಚನಾಂಕಿತ ಇನ್ನೊಬ್ಬರು ಬದಲಿಸಬಾರದು" ಎಂಬುದನ್ನು ಹಿಡಿದುಕೊಂಡು ಹುಯಿಲೆಬ್ಬಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಬಸವ ವಚನ ದೀಪ್ತಿಗೆ ಮುಟ್ಟುಗೋಲು ಹಾಕಿಸಿದರು. 

ಈ ನಿರ್ಣಯದ ವಿರುದ್ಧ ನಾವು ಕರ್ನಾಟಕದ ಹೈಕೋರ್ಟಿಗೆ ಹೋದೆವು. ನಮ್ಮ ವಕೀಲರು ಊರಲ್ಲಿ ಇಲ್ಲದಿರುವ ಸಮಯದಲ್ಲಿ ಹೈಕೋರ್ಟ್ ತೀರ್ಪು ಬಂದು ಸರ್ಕಾರದ ನಿಷೇಧಾಜ್ಞೆಯನ್ನು  ಅದು ಎತ್ತಿ ಹಿಡಿಯಿತು.

 ನ್ಯಾಯವನ್ನು ಬಯಸಿ ನಾವು ಸುಪ್ರೀಂ ಕೋರ್ಟ್ ಗೆ ಹೋದೆವು. ಪುಸ್ತಕ ಮುದ್ರಣಗೊಂಡು 21 ವರ್ಷಗಳು ಆದಮೇಲೆ ಈಗ ಸುಪ್ರೀಂ ಕೋರ್ಟ್ "ಸಮಾಜದಲ್ಲಿ ಅಶಾಂತಿಯುಂಟಾಗುತ್ತೆ" ಎಂಬ ವೀರಶೈವ ಮಹಾಸಭೆಯ ವಾದವನ್ನು ಆಧರಿಸಿ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದು ನಮ್ಮ ಕೇಸ್ ಅನ್ನು ವಜಾ ಮಾಡಿದೆ. 

ಈ ತೀರ್ಪು ಬರುವ 2 ದಿನ ಮೊದಲಿಗೆ ದಿನಾಂಕ 20-9-2017 ರಂದು ಪ್ರಜಾವಾಣಿ ಪತ್ರಿಕೆಯ ಮೊದಲನೇ ಪುಟದಲ್ಲಿ "ಅತಿರೇಕಕ್ಕೆ ಕಡಿವಾಣ ಹಾಕಬೇಕು - ಧರ್ಮದ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಭಿಮತ" ಎಂಬ ಶೀರ್ಷಿಕೆಯಡಿಯಲ್ಲಿ ಕೆಲವು ಅಂಶಗಳು ಪ್ರಕಟವಾದವು. ನ್ಯಾಯಮೂರ್ತಿಗಳಾದ ಶ್ರೀ ಎಸ್. ಎ. ಬೋಬಡೆ ಹಾಗೂ ಎಲ್.ನಾಗೇಶ್ವರ ರಾವ್ ಅವರಿದ್ದ ದ್ವಿಸದಸ್ಯ ಪೀಠವು ತನ್ನ ಅಭಿಪ್ರಾಯವನ್ನು ಪ್ರಕಟಿಸಿದೆ. 

 "ಸಮಾಜದಲ್ಲಿನ ವಿಭಿನ್ನ ದೃಷ್ಟಿಕೋನಗಳಿಗೆ ಸಂಬಂಧಿಸಿದಂತೆ ಸಹಿಷ್ಣುತೆ ಅಗತ್ಯವಾಗಿದ್ದು ಧಾರ್ಮಿಕ ವಿಷಯಗಳಲ್ಲಿ ಕಂಡು ಬರುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಬೇಕಾಗಿದೆ" ಎಂಬ ನ್ಯಾಯಮೂರ್ತಿಗಳ ಅಭಿಪ್ರಾಯ ಗಮನಾರ್ಹ. ಪುಸ್ತಕ ಪ್ರಕಟವಾದ ಸ್ವಲ್ಪ ಸಮಯದ ನಂತರ ಕೆಲವರು ಅಲ್ಲಲ್ಲಿ ಪ್ರತಿಭಟಿಸಿದರು. ಆದರೆ 21 ವರ್ಷಗಳ ಈ ಅವಧಿಯಲ್ಲಿ ಸಹಸ್ರಾರು ಜನರು 'ಲಿಂಗದೇವ' ಪರಿಕಲ್ಪನೆ ಅರ್ಥ ಮಾಡಿಕೊಂಡು ಅಳವಡಿಸಿಕೊಂಡು ಬಿಟ್ಟಿದ್ದಾರೆ. ಲಿಂಗದೇವನು ಗುರು ಬಸವಣ್ಣನವರ ಪ್ರಾಣವಾದಂತೆ ಇಂದು ಹಲವಾರು ಜನರ ಪ್ರಾಣವೇ ಆಗಿದ್ದಾನೆ. 

ಕೊಳ್ಳದ ಮಠದ ಮೂರ್ಖಸ್ವಾಮಿ ಶಾಂತವೀರ ಸ್ವಾಮಿಯು ಲಿಂಗದೇವ ಯಾರು? ಅವನು ಬದುಕಿದ್ದಾನೋ ಸತ್ತಿದ್ದಾನೋ? ಎಂಬ ಪ್ರಶ್ನೆ ಟಿ.ವಿ.ಯಲ್ಲಿ ಕೇಳುತ್ತದೆ. ಅದಕ್ಕೆ ಲಿಂಗದೇವನು ಸತ್-ಚಿತ್-ಆನಂದ-ನಿತ್ಯ-ಪರಿಪೂರ್ಣ, ಹುಟ್ಟುವವನೂ ಅಲ್ಲ, ಸಾಯುವವನೂ ಅಲ್ಲ ಎಂಬ ತಿಳುವಳಿಕೆ ಇಲ್ಲ. 

ಒಂದು ಸತ್ಯವನ್ನು ಸಂಶೋಧನೆಯ ಮೂಲಕ ಕಂಡುಹಿಡಿದಾಗ ಅದನ್ನು ಅರಿಯುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಅದನ್ನು ಅವರು ವಿರೋಧಿಸುವರು. ಹಾಗಾದರೆ ಸತ್ಯವು ಹೊರಬರುವುದು ಹೇಗೆ? ಅದು ಸ್ಥಾಪನೆಗೊಳ್ಳುವುದು ಹೇಗೆ?

"ಒಂದು ನಿರ್ದಿಷ್ಟ ಗ್ರಂಥ ಓದುವುದರಿಂದ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದಾದಲ್ಲಿ ಅಂಥ ಗ್ರಂಥ ಓದುವುದನ್ನು ಬಿಡಿ" ಎಂದು ದ್ವಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ ಮತ್ತು ಮುಂದುವರಿದು "ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸಲಾಗದು" ಎಂದು ಪೀಠ ತಿಳಿಸಿತು. 

ಬಹಳ ಮೌಲಿಕವಾದ ಮತ್ತೊಂದು ಅಭಿಪ್ರಾಯ ಗಮನಿಸಿರಿ. "ನಿಜವಾದ ಧರ್ಮವು ಲೌಕಿಕ ಚಿಂತನೆಯಿಂದ ಮುಕ್ತವಾಗಿಸಿ, ಅಲೌಕಿಕ ಚಿಂತನೆಯತ್ತ ಸಾಗುವುದನ್ನು ಕಲಿಸುತ್ತದೆ.  ಧರ್ಮದ ನಿಜವಾದ ಅನುಯಾಯಿಗಳು ಲೌಕಿಕ ವ್ಯವಹಾರಗಳ ಬಗ್ಗೆ ಚಿಂತಿಸದೆ ಅಲೌಕಿಕತೆಯನ್ನು ಪಾಲಿಸಿದ್ದಾರೆ. ಧರ್ಮ ರಾಜಕಾರಣದಲ್ಲಿ ಆಸಕ್ತಿ ಇರುವವರು ಮಾತ್ರ ಇಂತ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ" ಎಂದು ನ್ಯಾಯಪೀಠ ಹೇಳಿತು. 

'ಕೂಡಲಸಂಗಮದೇವ' - ಸ್ಥಾವರ ಲಿಂಗ. ಅದರ ಅರ್ಚನೆ ಒಂದು ಲೌಕಿಕ ನಡೆ. ಲಿಂಗದೇವ - ನಿರಾಕಾರ ಅವನ ಅರ್ಚನೆ ಅಲೌಕಿಕ. ಇದು ಅಜ್ಞಾನಿಗಳಿಗೆ ಅರ್ಥವಾಗುವುದಾದರೂ ಹೇಗೆ? 

"ಸಮಾಜದಲ್ಲಿ ಎಲ್ಲಾ ಪ್ರಕಾರದ ದೃಷ್ಟಿಕೋನಗಳು ಇವೆ. ಖಂಡಿಸುವ ಅಥವಾ ನಿರ್ಬಂಧಿಸುವ ಅಗತ್ಯವಿಲ್ಲ. ಆ ಲೇಖಕರ ದೃಷ್ಟಿಕೋನ ಬದಲಾಗಿದ್ದಲಿ, ಆ ಗ್ರಂಥವನ್ನು ಓದಬೇಡಿ" ಎಂದು ನ್ಯಾಯಮೂರ್ತಿಗಳು ತಿಳಿಸಿದರು. "ಅಂಕಿತನಾಮ ಬದಲಿಸಿರುವ ಚಿಕ್ಕ ಬದಲಾವಣೆಯು ಬಸವಣ್ಣನವರ ಅನುಯಾಯಿಗಳ ಭಾವನೆಗೆ ಧಕ್ಕೆ ತರಲಾರದು" ಎಂದು ಹೇಳಿದ್ದಾರೆ. 

 ಅನಿರೀಕ್ಷಿತವಾಗಿ ಬಂದ ನ್ಯಾಯಮೂರ್ತಿಗಳ ಈ ಅಭಿಪ್ರಾಯವು ನಿಜ ಬಸವಾನುಯಾಯಿಗಳಿಗೆ ಅತೀವ ಸಂತೋಷವನ್ನು ಉಂಟು ಮಾಡಿತು. ಆದರೆ ಇದಕ್ಕೆ ತದ್ವಿರುದ್ಧವಾಗಿ ತೀರ್ಪು ಹೊರ ಬಂದಿತು. ಇಷ್ಟು ಮೌಲಿಕವಾದ ಅಭಿಪ್ರಾಯ ಕೊಟ್ಟ ನ್ಯಾಯಮೂರ್ತಿಗಳು ಇದ್ದಕ್ಕಿದ್ದಂತೆಯೆ ನಮ್ಮ ವಕೀಲರಿಗೆ ವಾದ ಮಾಡಲು ಅವಕಾಶ ಕೊಡದೆ ದಾವೆಯನ್ನು ಅತ್ಯವಸರವಾಗಿ ವಜಾ ಮಾಡಲು ಯಾವ ಜಾದು ನಡೆದಿರಬಹುದು ಎಂದು ಅನೇಕರು ಚಿಂತಿಸಲು ತೊಡಗಿರುವುದು ಪರಮ ಸತ್ಯ.


~ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿ (ಮಾತಾಜಿ)

Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು