ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ
ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ
ಧರ್ಮಕರ್ತನ ಮೇಲೆ ಹೂವ ಸೂಾಡೋಣ ||ಪಲ್ಲವಿ||
ಇಷ್ಟಲಿಂಗವ ನೀಡಿ ಶ್ರೇಷ್ಠ ಮಾರ್ಗವ ತೋರಿ
ಲಿಂಗಾಯತ ಧರ್ಮವ ಕೊಟ್ಟ ಮಹಿಮನ ಮೇಲೆ || 1||
ಒಬ್ಬ ದೇವನ ನಂಬಿ ಶ್ರದ್ದೆಯಿಂ ಸಾಗುತ
ಅರಿವಿನ ನಿಲುವನ್ನು ಪಡೆದ ಸದ್ಭಕ್ತನ ಮೇಲೆ || 2||
ಕರ್ತನಿಗಲ್ಲದೆ ಕುಶ್ಚಿತಗೆರಗೆನು
ಎಂದು ಛಲವ ತೊಟ್ಟ ವೀರ ಮಹೇಶನ ಮೇಲೆ || 3 ||
ನಾನು ಎನ್ನುವ ಹಮ್ಮನು ಹರಿಯುತ
ದೇವನಿಗೊಲಿದಿಹ ಪರಮ ಪ್ರಸಾದಿಯ ಮೇಲೆ || 4 ||
ಅಂಗದ ಗುಣವಳಿದು ಲಿಂಗ ಭಾವವು ಬಲಿದು
ಲಿಂಗದೇಹಿಯಾಗಿಹ ಪ್ರಾಣಲಿಂಗಿಯ ಮೇಲೆ || 5||
ಸತಿಸುತ ಬಳಗದ ಮೋಹವ ಛೇದಿಸಿ
ದೇವಗೆ ಸತಿಯಾದ ದಿವ್ಯ ಶರಣನ ಮೇಲೆ || 6 ||
ಅಂಗ ಲಿಂಗ ಸಮರಸ ಶೃಂಗ ಭಾವವು ಒಲಿದು
ತ್ರಿಪುಟಿಯ ಭಾವವಳಿದ ಭಾವಲಿಂಗೈಕ್ಯನ ಮೇಲೆ || 7||
ಆರು ಸ್ಥಲಗಳ ದಾಂಟಿ ಧರೆಯ ಉದ್ದಾರಕ್ಕೆ
ಮಹಾಭಕ್ತ ಸ್ಥಲದಲಿ ನಿಂತ ಕರುಣಿಯ ಮೇಲೆ || 8 ||
ಮುಕ್ತಿದಾತನ ತೋರಿ ಮುಕ್ತಿದಾಯಕನಾದ
ಸಚ್ಚಿದಾನಂದನ ಮುದ್ದು ಕಂದನ ಮೇಲೆ || 9 ||
-✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿಯವರು.

Comments
Post a Comment