ಶಿವಾನಂದ ಸ್ವಾಮೀಯವರ ಸ್ವಾನುಭಾವಕ್ಕೆ ನಿಲುಕದ ವಚನಗಳು
ಶಿವಾನಂದ ಸ್ವಾಮೀಯವರ ಸ್ವಾನುಭಾವಕ್ಕೆ ನಿಲುಕದ ವಚನಗಳು
ವಚನ:
"ಮರೆಯಲಾಗದು ಹರಿಯಮ ರೆಯಲಾಗದು ಬ್ರಹ್ಮನ ! ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ ! ನಮ್ಮ ಕೂಡಲಸಂಗಮದೇವರ ಮರೆಯಲಹುದು"
(ಪದಗಳ ಅರ್ಥ: ಮರೆ=ಆಶ್ರಯ; ತೆತ್ತೀಸ ಕೋಟಿ = ಮೂವತ್ತಾರು ಕೋಟಿ; ದೇವರ್ಕಳ = ದೇವತೆಗಳ; ಕೂಡಲಸಂಗಮದೇವಾ=ಲಿಂಗದೇವಾ)
ಪರಮ ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿ ಮಾತಾಜಿಯವರು ಅನೇಕಬಾರಿ ಹೀಗೆ ಹೇಳುತ್ತಿದ್ದರು *“ವಚನ ಸಾಹಿತ್ಯವೆನ್ನುವುದು ಮೂರು ಬೀಗಗಳನ್ನು ಹಾಕಿದ ಭದ್ರವಾದ ಬೀರುವಿನೊಳಗೆ ಇಟ್ಟಿರುವ ನಿಧಿ ಇದ್ದ ಹಾಗೆ ಇದೆ. ಈ ನಿಧಿಯನ್ನು ತೆಗೆಯಲು ಮೂರು ಕೀಲಿಕೈಗಳು ಬೇಕು. ಒಂದನೆಯದು ಸಾಹಿತ್ಯದ ಕೀಲಿಕೈ, ಎರಡನೆಯದು ತತ್ವಜ್ಞಾನದ ಕೀಲಿಕೈ, ಮೂರನೆಯದು ಅನುಭಾವದ ಕೀಲಿಕೈ”*
ಇದು ಅಕ್ಷರಶಃ ಸತ್ಯವಾದ ಮಾತು.
ಕೇವಲ ಸಾಹಿತ್ಯ ಜ್ಞಾನ, ಕೇವಲ ತತ್ವಜ್ಞಾನ, ಕೇವಲ ಅನುಭಾವ ಹೊಂದಿದವರಿಗೆ ಗುರು ಬಸವಣ್ಣನವರ ಅಂತರಾಳ ಮತ್ತು ವಚನ ಸಾಹಿತ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಸಾಹಿತ್ಯ ಜ್ಞಾನ, ತತ್ವಜ್ಞಾನ ಮತ್ತು ಅನುಭಾವ ಹೊಂದಿದವರಿಂದ ಮಾತ್ರ ವಚನ ಸಾಹಿತ್ಯ ಅರಿತುಕೊಳ್ಳಲು ಸಾಧ್ಯವಿದೆ.
ʼವಚನ ದರ್ಶನʼ ಪುಸ್ತಕ ಸಂಪಾದಿಸಿರುವ ಶಿವಾನಂದ ಸ್ವಾಮೀಯವರು ಟಿವಿಯ ಸಂದರ್ಶನವೊಂದರಲ್ಲಿ ಮೇಲಿನ ವಚನವನ್ನು ಉಲ್ಲೇಖಿಸಿ ಗುರು ಬಸವಣ್ಣನವರು ದೇವಾನುದೇವತೆಗಳನ್ನು ನಿರಾಕರಿಸಿಲ್ಲ ಎನ್ನುವ ಅಭಿಪ್ರಾಯವನ್ನು ಕೊಟ್ಟಿದ್ದಾರೆ.
ಇವರ ಈ ವಿಚಾರ ಕೇಳಿದಾಗ, ಇವರಿಗೆ ವಚನ ಸಾಹಿತ್ಯದ ಬಗ್ಗೆ ಕಿಂಚಿತ್ತೂ ಅರಿವಿಲ್ಲ ಎನಿಸಿತು. ಕನ್ನಡ ಸಾಹಿತ್ಯ ಮತ್ತು ಭಾಷೆಯ ಬಗ್ಗೆಯೂ ಜ್ಞಾನವಿಲ್ಲ ಎನಿಸಿದೆ.
ಕನ್ನಡ ಭಾಷೆಯಲ್ಲಿ ಮೊದಲು ʼರೆʼ ಎನ್ನುವ ಎರಡು ಅಕ್ಷರಗಳಿದ್ದವು.
೧. ರೆ
೨. ಶಟಕರೇಫೆಯ ʼರೆʼ (ಶಟಕ ರೇಫೆ ʼರೆʼ ಇಲ್ಲಿ ಟೈಪ್ ಮಾಡಲು ಬರುವುದಿಲ್ಲ).
ಮರೆ=ಎಂದರೆ ಆಶ್ರಯ ಎಂದು ಅರ್ಥವಿದೆ. (ʼಮʼ ಮತ್ತು ಶಟಕ ರೇಫೆಯ ರೆ ಬರೆದಾಗ) ಈ ವಚನ ವನ್ನು ತಳೆಗರಿಯಿಂದ ಪುಸ್ತಕ ರೂಪದಲ್ಲಿ ಪ್ರಕಟಿಸುವಾಗ, ಕನ್ನಡ ಭಾಷೆಯಲ್ಲಿ ಈಗ ಶಟಕರೇಫೆಯ ʼರೆʼ ಇಲ್ಲದೇ ಇರುವುದರಿಂದ ಈ ವಚನವನ್ನು *ಮೊರೆಯಲಾಗದು ಹರಿಯ ಮ ಮೊರೆಯಲಾಗದು ಬ್ರಹ್ಮನ ! ಮೊರೆಯಲಾಗದು ತೆತ್ತೀಸಕೋಟಿ ದೇವರ್ಕಳ ! ನಮ್ಮ ಕೂಡಲಸಂಗಮದೇವರ ಮೊರೆಯಲಹುದು* ಎಂದು ಪ್ರಕಟಿಸಬೇಕಾಗಿತ್ತು.
*ಮರೆಯಲಾಗದು ಹರಿಯ = ಹರಿಯನ್ನು ಆಶ್ರಯಿಸಲಾಗದು; ಮರೆಯಲಾಗದು ಬ್ರಹ್ಮನ = ಬ್ರಹ್ಮನನ್ನು ಆಶ್ರಯಿಸಲಾಗದು, ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ ! = ತೆತ್ತೀಸಕೋಟಿ ದೇವತೆಗಳನ್ನು ಆಶ್ರಯಿಸಲಾಗದು. ನಮ್ಮ ಕೂಡಲಸಂಗಮದೇವರ ಏಂದರೆ ನಮ್ಮ ಲಿಂಗದೇವರ ಆಶ್ರಯಿಸಬಹುದು ಎನ್ನುವುದು ಈ ವಚನದ ಅರ್ಥ.*
ವಚನ:
ಹರಿ ಹರನೊಂದೆ ಎಂದಡೆ, ಸುರಿಯುವೆ ಬಾಯಲಿ ಬಾಲಹುಳುಗಳು, ಹರಿಗೆ ಹತ್ತು ಪ್ರಳಯ, ಬ್ರಹ್ಮಗನಂತ ಪ್ರಳಯ, ಹರಂಗೆ ಪ್ರಳಯ ಉಂಟೆಂಬುದ ಬಲ್ಲಡೆ ನೀವು ಹೇಳಿರೆ? ಪ್ರಳಯ ಪ್ರಳಯ ಅಂದಂದಿಂಗೆ ಹಳೆಯ, ನಮ್ಮ ಕೂಡಲಸಂಗಮದೇವ.
ವಚನ:
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ, ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ? ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ? ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.
*ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ಒಬ್ಬನೆ ಕಾಣಿರೊ, ಇಬ್ಬರು ಮೂವರೆಂಬುದು ಹುಸಿ ನೋಡಾ ! ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ.*
ಇಬ್ಬರು(ಬ್ರಹ್ಮ, ವಿಷ್ಣು) ಮೂವರು (ಬ್ರಹ್ಮ, ವಿಷ್ಣು,ಮಹೇಶ್ವರ) ಇವರೆಲ್ಲ ದೇವರಲ್ಲ. ನಮ್ಮ ಲಿಂಗದೇವನೊಬ್ಬನೇ ದೇವರು ಎಂದು ಮೇಲಿನ ವಚನಗಳಲ್ಲಿ ಗುರು ಬಸವಣ್ಣವರು ಸ್ಪಷ್ಟವಾಗಿ ಹರಿ ಬ್ರಹ್ಮರು ದೇವರುಗಳಲ್ಲವೆಂದು ಅವರನ್ನು ತಿರಸ್ಕರಿಸಿದ್ದಾರೆ.
ಇಂತಹ ವಚನಗಳು ಶಿವಾನಂದ ಸ್ವಾಮೀಜಿ ಯವರ ಕಣ್ಣಿಗೆ ಬಿದ್ದಿಲ್ಲವೋ ಅಥವಾ ಬಿದ್ದರೂ ಅರ್ಥವಾಗಿಲ್ಲವೋ ತಿಳಿಯದು.
ವಚನಗಳನ್ನು ಲಿಂಗಾಯತ ಧರ್ಮದ ಹಿನ್ನಲೆಯಲ್ಲಿಯೇ ಅರ್ಥೈಸಬೇಕೇ ಹೊರತು ಇನ್ನಾವುದೇ ಧರ್ಮ ಮತ್ತು ಆಚರಣೆಯ ಹಿನ್ನಲೆಯಲ್ಲಿ ಅರ್ಥೈಸಬಾರದು. ಕೆಲವೊಂದು ವಚನಗಳು ತದ್ವಿರುದ್ಧವಾಗಿವೆ. ವಚನಕಾರರು ಕೆಲವು ವಚನಗಳನ್ನು ಸಂಪೂರ್ಣವಾಗಿ ಲಿಂಗಾಯತ ಧರ್ಮಕ್ಕೆ ಒಳಪಡುವುದಕ್ಕಿಂತ ಮುಂಚೆ ಬರೆದ ವಚನಗಳು. ಇಂತಹ ವಚನಗಳನ್ನು ಬೇರೆ ವಚನಗಳೊಂದಿಗೆ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಕೆಲವು ವಚನಗಳ ಅರ್ಥ ಬೇರೆ ವಚನಗಳ ಮೇಲೆ ಅವಲಂಬಿತವಾಗಿರುತ್ತದೆ.
ಆದ್ದರಿಂದ ವಚನಗಳನ್ನು ಆಳವಾಗಿ ಅಧ್ಯಯನ ಮಾಡದೇ ಪುಸ್ತಕ ಸಂಪಾದನೆ ಮಾಡಿದರೆ ಅರ್ಥಕ್ಕಿಂತ ಅನರ್ಥವೇ ಹೆಚ್ಚಾಗುತ್ತದೆ.


Comments
Post a Comment